ಕೋಲ್ಡ್, ಕ್ರಿಶ್ಚನ್
1816-1870. ಡೆನ್ಮಾರ್ಕಿನಲ್ಲಿ ಗ್ರಂಟ್ವಿಗ್ಗನ ಜನತಾಶಾಲೆಗಳ ಕಲ್ಪನೆಗೆ ರೂಪುಕೊಟ್ಟವರಲ್ಲಿ ಒಬ್ಬ. ಮದುವೆಯಾಗದೆ ಏಕಾಂಗಿಯಾಗಿದ್ದುಕೊಂಡು ತನ್ನ ಸರ್ವಸ್ವವನ್ನೂ ಜನತಾ ಶಿಕ್ಷಣಶಾಲೆಗಳ ಪುರೋಭಿವೃದ್ಧಿಗಾಗಿ ಮುಡುಪಾಗಿಟ್ಟ ಕೀರ್ತಿ ಈತನದು. ಹುಟ್ಟಿನಿಂದ ಕೋಲ್ಡ್ ಒಬ್ಬ ಚಮ್ಮಾರನ ಮಗ; ಬಡಕುಟುಂಬದಲ್ಲಿ ಹುಟ್ಟಿದವ. ಚಿಕ್ಕಂದಿನಲ್ಲಿ ತಾಯಿಯಿಂದ ಒಳ್ಳೆಯ ಕಥೆಗಳನ್ನು ಕೇಳಿದನಲ್ಲದೆ ಶಾಲೆಯಲ್ಲಿದ್ದಾಗ ನೆರೆಹೊರೆಯವರನ್ನು ಮತ್ತು ದೇವರನ್ನು ಹೇಗೆ ಪ್ರೀತಿಸುವುದು ಎಂಬುದನ್ನು ತಿಳಿದುಕೊಂಡ.
ವಯಸ್ಕನಾದ ಮೇಲೆ ಕೋಲ್ಡ್ ಶ್ರೀಮಂತರ ಮಕ್ಕಳಿಗೆ ಪಾಠ ಹೇಳುತ್ತಿದ್ದು ರ್ಹೋಡಿಂಗ್ ಜನತಾಶಾಲೆಯ ನಿರ್ಮಾಣದಲ್ಲಿ ಸಹಕಾರ ನೀಡಿದ. ಡೇನಿಷ್ ಅಸೋಸಿಯೇಷನ್ನಿನ ಮುಖಂಡನಾಗಿ ಉಪನ್ಯಾಸಗಳನ್ನು ಮಾಡಿದ. ಧಾರ್ಮಿಕ ವಿಷಯಗಳನ್ನು ತನಗೆ ಇಷ್ಟ ಬಂದ ರೀತಿ ಬೋಧಿಸಲು ಸ್ವಾತಂತ್ರವಿರಲಿಲ್ಲವಾಗಿ ಜುಗುಪ್ಸೆಗೊಂಡು ಏಷ್ಯ ಮೈನರ್‍ಗೆ ಹೋಗಿ ಅಲ್ಲಿ ಒಂದು ಕ್ರೈಸ್ತಸಂಸ್ಥೆಯಲ್ಲಿ ಸೇವಕನಾದ. ಅನಂತರ ತುರ್ಕಿಯ ಪಟ್ಟಣ ಒಂದರಲ್ಲಿ ಪುಸ್ತಕಕ್ಕೆ ರಟ್ಟು ಕಟ್ಟುವ ಕೆಲಸ ಮಾಡಿದ. ಅಲ್ಲಿನ ಏಕಾಂತವಾಸದಲ್ಲಿ ಶಿಕ್ಷಣದ ಬಗ್ಗೆ ಇವನ ಭಾವನೆಗಳು ಪರಿಪಕ್ವಗೊಂಡವು.

ರಟ್ಟು ಕಟ್ಟಿ ಸಂಪಾದಿಸಿದ 55 ಪೌಂಡುಗಳೊಡನೆ ಕೋಲ್ಡ್ ಡೆನ್ಮಾರ್ಕಿಗೆ ಹಿಂತಿರುಗಿ ಗ್ರಂಟ್ವಿಗ್ಗನನ್ನು ಕಂಡು ಅವನ ಮುಂದೆ ತನ್ನ ಯೋಜನೆಯನ್ನು ಇಟ್ಟ.. ಜನತಾ ಶಾಲೆಗಳಿಗೆ ಸೇರುವ ವಿದ್ಯಾರ್ಥಿಗಳ ವಯಸ್ಸು 18 ಇರಬೇಕೆ 15 ಇರಬೇಕೇ ಎಂಬ ಬಗ್ಗೆ ಇಬ್ಬರಲ್ಲಿ ವಿವಾದ ನಡೆಯಿತಾದರೂ ಕೊನೆಗೆ 18 ಸರಿಯಾದ ವಯಸ್ಸು ಎಂಬ ಗ್ರಂಟ್ವಿಗ್ಗನ ಅಭಿಪ್ರಾಯವನ್ನು ಕೋಲ್ಡ್ ಒಪ್ಪಿದ. ಗ್ರಂಟ್ವಿಗ್ 70 ಪೌಂಡುಗಳನ್ನು ಕೂಡಿಸಿಕೊಟ್ಟ.. ಕೇವಲ 125 ಪೌಂಡುಗಳಿಂದ ಜನತಾಶಾಲೆಯನ್ನು ತೆಗೆಯುವುದು ಸಾಧ್ಯವಿರಲಿಲ್ಲ.

ರಿಸ್ಲಿಂಗ್ ಎಂಬಲ್ಲಿ ಕೋಲ್ಡ್ ಸ್ವಲ್ಪ ಜಮೀನನ್ನು ಕೊಂಡು ಒಂದು ಹುಲ್ಲು ಜೋಪಡಿಯನ್ನು ನಿರ್ಮಿಸಿಕೊಂಡ. ಶಾಲೆಗೆ ಸೇರಲು 25 ವಿದ್ಯಾರ್ಥಿಗಳು ಮುಂದೆ ಬಂದರು. ಈತನ ಅವಿವಾಹಿತ ತಂಗಿ ಅಡಿಗೆಮನೆಯ ವ್ಯವಸ್ಥೆ ವಹಿಸಿಕೊಂಡಳು.
ಕೋಲ್ಡ್ ಅಂಥ ಪಂಡಿತನಲ್ಲ. ಆದರೆ ಒಳ್ಳೆಯ ಉಪಾಧ್ಯಾಯ. ವಿದ್ಯಾರ್ಥಿಗಳನ್ನು ಹುರಿದುಂಬಿಸುವ ವ್ಯಕ್ತಿತ್ವ ಅವನಲ್ಲಿತ್ತು; ದೇಶದ ಚರಿತ್ರೆಯನ್ನು ಮತ್ತು ಬೈಬಲ್ಲಿನ ಕಥೆಗಳನ್ನು ಈತ ಸ್ವಾರಸ್ಯವಾಗಿ ಹೇಳುತ್ತಿದ್ದ. ನಾನು ಹೇಳುವುದನ್ನು ಗಮನವಿಟ್ಟು ಕೇಳಿದವರು ಈ ಪ್ರಪಂಚವನ್ನು ಬಿಟ್ಟ ನಂತರವೂ ಅದನ್ನು ಮರೆಯಲಾರರು ಎಂದು ಈತ ಆಗಾಗ ತನ್ನ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದ.
ಕೋಲ್ಡ್ ವಿದ್ಯಾರ್ಥಿಗಳ ಜೊತೆಯಲ್ಲೇ ವಾಸಿಸುತ್ತಿದ್ದ. ಅವರೊಡನೆ ಕುಳಿತು ಊಟ ಮಾಡುತ್ತಿದ್ದ. ಅವರೊಡನೆ ಜೀವನದ ಸಮಸ್ಯೆಗಳನ್ನು ಚರ್ಚಿಸುತ್ತಿದ್ದ. ವಿದ್ಯಾರ್ಥಿಗಳು ಇವೆಯಿಕ್ಕದೆ, ತುಟಿಪಿಟಕ್ಕೆನ್ನದೆ ಕುಳಿತು ಇವನ ಮಾತುಗಳನ್ನು ಕೇಳುತ್ತಿದ್ದರು. ವಿದ್ಯಾರ್ಥಿಗಳು ಟಿಪ್ಪಣಿಗಳನ್ನು ಬರೆದುಕೊಳ್ಳುವುದು ಕೋಲ್ಡನಿಗೆ ಇಷ್ಟವಿರಲಿಲ್ಲ. ಎಲ್ಲ ವಿಷಯಗಳನ್ನು ವಿದ್ಯಾರ್ಥಿಗಳು ತಲೆಯಲ್ಲಿ ತುಂಬಿಕೊಳ್ಳಬೇಕೆಂಬುದು ಇವನ ಆಸೆ.

ಒಮ್ಮೆ ಸರ್ಕಾರದ ಅಧಿಕಾರಿಯೊಬ್ಬ ಶಾಲೆಯನ್ನು ತನಿಖೆಮಾಡಲು ಬಂದವನು ಶಾಲೆಯ ಪ್ರಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದನಂತೆ. ಇಂದು ಹಾಕಿದ ಬೀಜ ಇಂದೇ ಮೊಳೆಯುವುದೇ-ಎಂದು ಕೋಲ್ಡ್ ಕೊಟ್ಟ ಉತ್ತರ ತನಿಖಾಧಿಕಾರಿಯ ಕಣ್ಣನ್ನು ತೆರೆಯಿಸಿತಾಗಿ ಆತ ತೃಪ್ತಿಗೊಂಡು ಸರ್ಕಾರಕ್ಕೆ ಶಿಫಾರಸು ಮಾಡಿ ಶಾಲೆಗೆ ಬರಬೇಕಾಗಿದ್ದ ಸಹಾಯಧನವನ್ನು ಕೊಡಿಸಿದನಂತೆ.
ಜನತಾಶಾಲೆಗಳ ಆಡಳಿತದಲ್ಲಿ ಸರ್ಕಾರ ಕೈಹಾಕದೆ ನೆರವು ನೀಡುವಂತೆ ಮಾಡಲು ಶ್ರಮಿಸಿದ ಕೀರ್ತಿ ಕೋಲ್ಡನಿಗೆ ಸಲ್ಲುತ್ತದೆ.									  			(ಟಿ.ಆರ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ